
ಮಂಡ್ಯ: ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮೂರು ವರ್ಷದ ಕಂದಮ್ಮ ಕಣ್ಮುಚ್ಚಿರುವ ಘಟನೆ ಮಂಡ್ಯದಲ್ಲಿ ನಡೆದಿದ್ದು, ಸ್ವರ್ಣಸಂದ್ರ ಬಳಿ ಹೆಲ್ಮೆಟ್ ತಪಾಸಣೆಯಲ್ಲಿದ್ದ ಪೊಲೀಸರು ಅಡ್ಡಗಟ್ಟಿದಾಗ, ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ಮೂರು ವರ್ಷದ ಮಗು ಹೃತೀಕ್ಷ ಸಾವನ್ನಪ್ಪಿದೆ. ಮುದ್ದಾದ ಮಗುವನ್ನ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು.
ಪೋಷಕರ ತಂದೆ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಗು ಕಳೆದುಕೊಂಡ ನೋವಿನಲ್ಲಿ ಮಾತನಾಡಿರುವ ತಂದೆ, ಪಾಪುಗೆ ನಾಯಿ ಕಚ್ಚಿತ್ತು. ಮದ್ದೂರಿನಿಂದ ಕರೆದುಕೊಂಡು ಬಂದ್ವಿ. ಇಲ್ಲಿನ ಸರ್ವೀಸ್ ರಸ್ತೆಯಲ್ಲಿ ಗಾಡಿಯನ್ನು ಅಡ್ಡ ಹಾಕಿದ್ದಾರೆ. ಆಗ ಅರ್ಜೆಂಟ್ ಅಲ್ಲಿ ಆಸ್ಪತ್ರೆಗೆ ಹೊರಟಿದ್ವಿ. ಆಗ ಗಾಡಿ ಮೂವ್ ಮಾಡಲು ಕೊಟ್ಟಿಲ್ಲ. ಅವರ ಗಾಡಿ ಅಡ್ಡ ಹಾಕಿದ ಪರಿಣಾಮ ನಮ್ಮ ಬೈಕ್ ಸ್ಕಿಡ್ ಆಗಿದೆ. ಸ್ಕಿಡ್ ಆಗಿದ ತಕ್ಷಣ ಮಗು ಬೀಳುತ್ತಿದ್ದಂತೆಯೇ ಬೇರೆ ವಾಹನ ಬಂದು ಪಾಪು ಮೇಲೆ ಹರಿದಿದೆ.
ನನ್ನ ಮಗಳ ಜೀವ ತಿನ್ನೋಕೆ ಇವರೇ ಕಾರಣ ಸ್ವಾಮಿ. ಅವರಿಗೆ ಬ್ಯಾಂಡೇಜ್ ಹಾಕಿದ್ದೂ ಕಾಣಿಸಿಲ್ವಾ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ ಸ್ವಾಮಿ ನನ್ನ ಮಗಳ ತಂದು ಕೊಡ್ತೀರಾ? ಎಂದು ಮಗುವಿನ ತಂದೆ ಭಾವುಕರಾಗಿದ್ದಾರೆ. ಇನ್ನು ಘಟನಾ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿದ್ದು. ಸ್ಥಳದಲ್ಲಿ ಜಮಾಯಿಸಿರುವ ಪ್ರತಿಭಟನಕಾರರು ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಕ್ ಅಡಗಟ್ಟಿದ ಪೊಲೀಸರನ್ನು ಸ್ಥಳಕ್ಕೆ ಕರೆಸುವಂತೆ ಆಗ್ರಹಿಸಿದ್ದು. ನ್ಯಾಯ ಸಿಗುವವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಎಎಸ್ಐಗಳನ್ನು ಅಮಾನತು ಮಾಡಲಾಗಿದೆ. ಮಗು ಸಾವಿಗೆ ಮಂಡ್ಯ ಟ್ರಾಫಿಕ್ ಪೊಲೀಸರು ಕಾರಣವೆಂದು ಕುಟುಂಬಂಸ್ಥರು ಹೆದ್ದಾರಿಯಲ್ಲಿ ಪ್ರತಿಭಟನೆ ಕುಳಿತ್ತಿದ್ದು, ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಎಚ್ಚೆತ್ತುಕೊಂಡು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಹೆಲ್ಮೆಟ್ ತಪಾಸಣೆ ಮಾಡುತ್ತಿದ್ದ ಮೂವರು ಎಎಸ್ಐಗಳನ್ನು ಅಮಾನತು ಮಾಡಿದ್ದಾರೆ.