
ಮಂಗಳೂರು: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದಲ್ಲಿ ನಡೆದ ಅಬ್ದುಲ್ ರಹೀಂ (32) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಲ್ಲಿ ಗಾಯಗೊಂಡ ಕಲಂದರ್ ಶಫಿ ಮಾಹಿತಿ ಆಧಾರದ ಮೇಲೆ 15 ಜನರ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ದಾಳಿಯಲ್ಲಿ ಅಬ್ದುಲ್ ರಹೀಂ ಮೃತಪಟ್ಟಿದ್ದು, ಕಲಂದರ್ ಶಫಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳು ಕಲಂದರ್ ಶಫಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆ್ಯಂಬುಲೆನ್ಸ್ನಲ್ಲಿ ಮೊಹಮ್ಮದ್ ನಿಸಾರ್ಗೆ ನೀಡಿದ ಮಾಹಿತಿಯ ಆಧಾರದ ಮೇಲೆ ದೂರು ದಾಖಲಾಗಿದೆ. ದೂರಿನಲ್ಲಿ ಆರೋಪಿಗಳ ಪೈಕಿ ಇಬ್ಬರು ಅಬ್ದುಲ್ ರಹೀಂನ ಪರಿಚಯಸ್ಥರಾದ ದೀಪಕ್ ಮತ್ತು ಸುಮಿತ್ ಎಂದು ಗುರುತಿಸಲಾಗಿದೆ. ಬಂಟ್ವಾಳ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 103, 109, 118(1), 118(2), 190, 191(1), 191(2), ಮತ್ತು 191(3) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇನ್ನು ಪ್ರಕರಣದ ತನಿಖೆಗಾಗಿ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಯತೀಶ್ ಐದು ಪೊಲೀಸ್ ತಂಡಗಳನ್ನು ರಚಿಸಿದ್ದಾರೆ. ಡಿವೈಎಸ್ಪಿ ವಿಜಯ್ ಪ್ರಕಾಶ್ ನೇತೃತ್ವದ ಈ ತಂಡಗಳಲ್ಲಿ ಮಂಗಳೂರು ನಗರ ಸಿಸಿಬಿ ಮತ್ತು ಬಂಟ್ವಾಳ ಗ್ರಾಮಾಂತರ ಠಾಣೆಯ ಸಿಬ್ಬಂದಿ ಸೇರಿದ್ದಾರೆ. ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿದ್ದ ಅಬ್ದುಲ್ ರಹೀಂ ಪಿಕ್ಅಪ್ ವಾಹನದ ಚಾಲಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.