
ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಕಾ ಉಗುಳಿದ್ರೆ, ಸಿಗರೇಟ್ ಸೇದಿದರೆ ಇನ್ನುಮುಂದೆ 1000 ರೂ. ದಂಡ ಕಟ್ಟಬೇಕು ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.. ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಯಮನ) (ಕರ್ನಾಟಕ ತಿದ್ದುಪಡಿ) ಅಧಿನಿಯಮ 2024 ಜಾರಿ ಮಾಡಿ ರಾಜ್ಯ ಸರ್ಕಾರ, ಗೆಜಟ್ ನೋಟಿಫಿಕೇಷನ್ ಹೊರಡಿಸಿದೆ.
ಜೊತೆಗೆ ಹುಕ್ಕಾ ಬಾರ್ ನಡೆಸಿ ನಿಯಮ ಉಲ್ಲಂಘಿಸುವವರಿಗೆ 1 ವರ್ಷದಿಂದ 3 ವರ್ಷ ಜೈಲು ಹಾಗೂ 50 ಸಾವಿರ ರೂಪಾಯಿದಿಂದ 1 ಲಕ್ಷ ರೂಪಾಯಿಗಳವರೆಗೆ ದಂಡ ವಿಧಿಸಲಾಗುತ್ತದೆ. ಇನ್ನು 21 ವರ್ಷಗಳಿಗಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಹಾಗೂ ಹುಕ್ಕಾ ಬಾರ್ ನಿಷೇಧಿಸುವ ಮಸೂದೆಗೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ.
ರಾಜ್ಯದಲ್ಲಿ 21 ವಯೋಮಿತಿ ಒಳಗಿನ ವ್ಯಕ್ತಿಗಳಿಗೆ ಸಿಗರೇಟು, ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವಂತಿಲ್ಲ. ಪ್ರಸ್ತುತ ತಂಬಾಕು ಉತ್ಪನ್ನಗಳನ್ನು ಖರೀದಿಸುವುದಕ್ಕೆ ಕನಿಷ್ಠ ವಯೋಮಾನ 18 ಇದೆ. ಈಗ ಆ ವಯೋಮಾನವನ್ನು 21 ವರ್ಷಕ್ಕೆ ಏರಿಕೆ ಮಾಡಲಾಗಿದೆ.