
ದಕ್ಷಿಣ ಆಫ್ರಿಕಾದ ಸ್ಟಾರ್ ಆಟಗಾರ ಹೆನ್ರಿಕ್ ಕ್ಲಾಸನ್ ಅವರು ದಿಢೀರ್ ನಿವೃತ್ತಿ ಘೋಷಣೆ ಮಾಡಿದ್ದಾರೆ. 33 ವರ್ಷದ ಆಟಗಾರ ಕ್ಲಾಸನ್ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುತ್ತಿರುವುದಾಗಿ ಹೇಳಿದ್ದಾರೆ.. ತಮ್ಮ ಹೊಡಿಬಡಿ ಆಟದಿಂದಲೇ ವಿಶ್ವ ಕ್ರಿಕೆಟ್ನಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಆಸ್ಟ್ರೇಲಿಯಾದ ಆಟಗಾರ ಗ್ಲೆನ್ ಮ್ಯಾಕ್ಸ್ವೆಲ್ ಅವರು ಏಕದಿನ ಕ್ರಿಕೆಟ್ ಗೆ ವಿದಾಯ ಹೇಳಿದ ಕೆಲವೇ ಗಂಟೆಗಳಲ್ಲಿ ಕ್ಲಾಸನ್ ತನ್ನ ನಿರ್ಧಾರ ಪ್ರಕಟಿಸಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸಾಗ್ರಾಮ್ ಮೂಲಕ ಕ್ಲಾಸನ್ ತನ್ನ ನಿವೃತ್ತಿ ಪ್ರಕಟಿಸಿದ್ದಾರೆ. ಈ ನಿರ್ಧಾರ ದಕ್ಷಿಣ ಆಫ್ರಿಕಾದ ಸೇರಿ ಕ್ರಿಕೆಟ್ ಅಭಿಮಾನಿಗಳಿಗೆ ಸಂಪೂರ್ಣ ಆಘಾತಕಾರಿಯಾಗಿದೆ. ಆಕ್ರಮಣಕಾರಿ ಹೊಡೆತದ ಆಟಕ್ಕೆ ಹೆಸರುವಾಸಿಯಾದ ಕ್ಲಾಸನ್ ನಾಲ್ಕು ಟೆಸ್ಟ್, 60 ಏಕದಿನ ಮತ್ತು 58 ಟಿ20ಐ ಸೇರಿದಂತೆ 122 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾವನ್ನು ಪ್ರತಿನಿಧಿಸಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿಯಲು ನಿರ್ಧರಿಸಿದ್ದೇನೆ ಎಂದು ಘೋಷಿಸುತ್ತಿರುವ ಈ ದಿನ ನನಗೆ ದುಃಖದ ದಿನ. ಭವಿಷ್ಯದಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಯಾವುದು ಉತ್ತಮ ಎಂದು ನಿರ್ಧರಿಸಲು ನನಗೆ ಬಹಳ ಸಮಯ ಹಿಡಿಯಿತು. ಇದು ನಿಜಕ್ಕೂ ತುಂಬಾ ಕಷ್ಟಕರವಾದ ನಿರ್ಧಾರವಾಗಿತ್ತು. ನಾನು ಜೀವನಪರ್ಯಂತ ಅಮೂಲ್ಯವಾದ ಉತ್ತಮ ಸ್ನೇಹ ಮತ್ತು ಸಂಬಂಧಗಳನ್ನು ಹೊಂದಿದ್ದೇನೆ. ಪ್ರೋಟಿಯಸ್ಗಾಗಿ ಆಡಿದ ಕಾರಣ ನನ್ನ ಜೀವನವನ್ನು ಬದಲಾಯಿಸಿದ ಮಹಾನ್ ವ್ಯಕ್ತಿಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು ಎಂದು ಕ್ಲಾಸೆನ್ ಇನ್ಸ್ಟಾಗ್ರಾಮ್ನಲ್ಲಿ ಬರೆದಿದ್ದಾರೆ.
2018 ರಲ್ಲಿ ದಕ್ಷಿಣ ಆಫ್ರಿಕಾ ಪರ ಮೊದಲ ಬಾರಿಗೆ ಕಣಕ್ಕಿಳಿದಿದ್ದ ಕ್ಲಾಸೆನ್ ಒಂದು ವರ್ಷದ ನಂತರ ಅಂದರೆ 2019 ರಲ್ಲಿ ಟೆಸ್ಟ್ ತಂಡದಲ್ಲೂ ಸ್ಥಾನ ಪಡೆದರು. ಆದಾಗ್ಯೂ, ಅವರು ತಮ್ಮ ಅಲ್ಪಾವಧಿಯ ವೃತ್ತಿಜೀವನದಲ್ಲಿ ಅನೇಕ ಸಾಧನೆಗಳನ್ನು ಸಾಧಿಸಿದ್ದಾರೆ. ಆದರೆ ಈಗ ಅವರು ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ್ದಾರೆ.