
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮಗನನ್ನು ಕಳೆದುಕೊಂಡ ಹಾಸನದ ಭೂಮಿಕ್ ತಂದೆ ಮಗನ ಸಮಾಧಿ ಮುಂದೆ ಕಣ್ಣೀರು ಹಾಕುತ್ತಿರುವುದು ದೃಶ್ಯ ಕರುಳು ಹಿಂಡುವಂತಿದೆ. ಈ ಥರ ಪರಿಸ್ಥಿತಿ ಯಾವ ತಂದೆ ತಾಯಿಗೂ ಬರಬಾರದು. ಇದೇ ಜಾಗದಲ್ಲಿ ನನ್ನ ಮಗನನ್ನ ಮಲಗಿಸಿದ್ದೇನೆ. ನನ್ನ ಮಗನಿಗೋಸ್ಕರವೇ ಈ ಜಾಗ ಮಾಡಿದ್ದು, ಈಗ ಇಲ್ಲೇ ಮಲಗಿಸಿದ್ದೀನಿ.. ಯಾರಿಗೂ ಈ ಪರಿಸ್ಥಿತಿ ಬೇಡ ಎಂದು ಭೂಮಿಕ್ ತಂದೆ ಲಕ್ಷ್ಮಣ್ ಮಗನ ಸಮಾಧಿ ಬಳಿ ಗೋಳಾಡಿದ್ದಾರೆ..
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕುಪ್ಪಗೋಡು ಗ್ರಾಮದ ಲಕ್ಷ್ಮಣ್ ತಮ್ಮ ಮಗನನ್ನು ಕಳೆದುಕೊಂಡಿದ್ದು, ಕಳೆದ ಇಪ್ಪತ್ತು ವರ್ಷಗಳಿಂದ ಬೆಂಗಳೂರಿನಲ್ಲಿ ಸ್ವಂತ ಉದ್ಯಮ ಮಾಡಿಕೊಂಡು ಸಾಕಷ್ಟು ಸಂಪಾದನೆ ಮಾಡಿ ದೊಡ್ಡ ಮಟ್ಟಕ್ಕೆ ಬಂದಿದ್ದ ಲಕ್ಷ್ಮಣ್ ಮಗನಿಗಾಗಿ ಸಾಕಷ್ಟು ಕನಸು ಕಂಡಿದ್ದರು, ಮಗನೂ ಕೂಡ ಎಂದು ತಂದೆಗೆ ವಿರುದ್ದವಾಗಿ ಮಾತನಾಡದೆ, ತಂದೆಯ ಮಾರ್ಗದರ್ಶನದಂತೆ ನಡೆಯುತ್ತಿದ್ದನು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತದಲ್ಲಿ ಮಗ ದಾರುಣವಾಗಿ ಸಾವನ್ನಪ್ಪಿದ್ದು, ಮಗನ ಸಾವನ್ನು ಅರಗಿಸಿಕೊಳ್ಳಲು ಸಾಧ್ಯವಾಗದೆ ಸಮಾಧಿ ಬಳಿ ತಂದೆ ಕಣ್ಣೀರುಡುತ್ತಿದ್ದಾರೆ.