
ನವದೆಹಲಿ: ಹೈಕಮಾಂಡ್ ನಾಯಕರ ಬುಲಾವ್ ಮೇರೆಗೆ ದೆಹಲಿಗೆ ತೆರಳಿರುವ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ವರಿಷ್ಠರ ಜೊತೆ ಮಹತ್ವದ ಮಾತುಕತೆ ನಡೆಸಿ ನಡೆಸಿದ್ದಾರೆ. ಜಾತಿ ಜನಗಣತಿ ಬಗ್ಗೆ ಚರ್ಚೆ ನಡೆದಿದೆ. ಜಾತಿ ಜನಗಣತಿ ವರದಿ 10 ವರ್ಷದ ಹಳೆಯದಾಗಿರುವ ಕಾರಣ ನಿರ್ಧಿಷ್ಟ ಕಾಲ ಮಿತಿಯಲ್ಲಿ ಮರು ಸರ್ವೇ ಮಾಡಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇನ್ನು ಜಾತಿ ಜನಗಣತಿ ಮರು ಸರ್ವೇ ಮಾಡುವ ಬಗ್ಗೆಯೂ ಸಹ ಸ್ವತಃ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರ ಸಭೆ ನಂತರ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ರಾಜ್ಯ ಬೆಳವಣಿಗೆ ಬಗ್ಗೆ ರಾಹುಲ್ ಗಾಂಧಿ ಚರ್ಚೆ ಮಾಡಿದರು. ಮುಖ್ಯವಾಗಿ ಜಾತಿಗಣತಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಿದರು. ಕೆಲವರು ವರದಿಗೆ ಅಪಸ್ವರ ಎತ್ತಿರುವ ಬಗ್ಗೆ ಚರ್ಚೆ ಆಯಿತು. ಜಾತಿಗಣತಿ ಸಮೀಕ್ಷೆ ಮಾಡಿ 9 ರಿಂದ 10 ವರ್ಷ ಆಗಿದೆ. ಹಾಗಾಗಿ ಮತ್ತೊಮ್ಮೆ ಸಮೀಕ್ಷೆ ಮಾಡಲು ಹೇಳಿದ್ದಾರೆ. ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆಗೆ ನಾವು ಒಪ್ಪಿಗೆ ನೀಡಿದ್ದೇವೆ. 90 ದಿನದೊಳಗೆ ಜಾತಿಗಣತಿ ಸಮೀಕ್ಷೆ ಮುಗಿಯಲಿದೆ ಎಂದು ಸ್ಪಷ್ಟಪಡಿಸಿದರು.
ಕಾಲ್ತುಳಿತ ದುರಂತ ಪ್ರಕರಣದ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದ್ದು, ಕೈಗೊಂಡಿರುವ ಕ್ರಮದ ಬಗ್ಗೆ ವಿವರಣೆ ನೀಡಿದ್ದೇವೆ. ಸಿಐಡಿ, ನ್ಯಾ.ಕುನ್ಹಾ ನೇತೃತ್ವದ ತನಿಖೆ ಬಗ್ಗೆ ಮಾಹಿತಿ ನೀಡಿದ್ದೇವೆ. ಪೊಲೀಸ್ ಅಧಿಕಾರಿಗಳ ಅಮಾನತು, ಇಂಟಲಿಜೆನ್ಸ್ ಮುಖ್ಯಸ್ಥರ ವರ್ಗಾವಣೆ ಈ ಬಗ್ಗೆ ವರಿಷ್ಠರಿಗೆ ಮಾಹಿತಿ ನೀಡಲಾಗಿದೆ ಎಂದರು.