
ಶಿವಮೊಗ್ಗ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಕಾಂತಾರ ಚಾಪ್ಟರ್ 1 ಸಿನಿಮಾದ ಮತ್ತೊಬ್ಬ ಕಲಾವಿದ ನಿಧನರಾಗಿದ್ದಾರೆ. ವಿಜು ವಿ. ಕೆ ಎಂಬ ಕೇರಳದ ತ್ರಿಶೂರ್ ಮೂಲದ ಕಲಾವಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕನ್ನಡ ಸಿನಿಮಾ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಚಿತ್ರಗಳಲ್ಲೊಂದಾದ ಕಾಂತಾರ ಚಿತ್ರದ ಕಲಾವಿದರಿಗೆ ಸಾಲು ಸಾಲು ದುರಂತಗಳು ಸಂಭವಿಸುತ್ತಿವೆ. ಈ ಬಾರಿ ಮಿಮಿಕ್ರಿ ಕಲಾವಿದ ವಿಜು ವಿಕೆ ಹೃದಯಾಘಾತದಿಂದ ಅಕಾಲ ಮರಣ ಹೊಂದಿದ್ದಾರೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಬುಧವಾರ ರಾತ್ರಿ ಈ ದುರಂತ ನಡೆದಿದೆ.
ಕೇರಳದ ತ್ರಿಶೂರ್ ಮೂಲದ ಮಿಮಿಕ್ರಿ ಕಲಾವಿದ ವಿಜು ಕಾಂತರ ಚಲನಚಿತ್ರಕ್ಕಾಗಿ ಆಗುಂಬೆ ಸಮೀಪದ ಯಡೂರಿನ ಹೋಂ ಸ್ಟೇ ಒಂದರಲ್ಲಿ ತಂಗಿದ್ದರು. ಬುಧವಾರ ರಾತ್ರಿ ಏಕಾಏಕಿ ವಿಜು ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ತೀರ್ಥಹಳ್ಳಿಯ ಆಸ್ಪತ್ರೆಗೆ ರವಾನಿಸುವ ವೇಳೆ ಮಾರ್ಗ ಮಧ್ಯೆ ವಿಜು ಕೊನೆಯುಸಿರೆಳೆದಿದ್ದಾರೆ. ವಿಜು ವಿಕೆ ಅವರ ದೇಹವನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಅವರ ಕುಟುಂಬದವರು ಕೇರಳದಿಂದ ತೀರ್ಥಹಳ್ಳಿಗೆ ತೆರಳುತ್ತಿದ್ದಾರೆಂದು ತಿಳಿದುಬಂದಿದೆ. ಅವರ ಅಕಾಲ ಮರಣ ಕುಟುಂಬ, ಸಿನಿಮಾ ಮತ್ತು ಅಭಿಮಾನಿಗಳಿಗೆ ಆಘಾತವನ್ನು ನೀಡಿದೆ.