
ಕೇರಳದಲ್ಲಿ ಸಿಂಗಾಪುರದ ಕಾರ್ಗೋ ಶಿಪ್ ಸಮುದ್ರದಲ್ಲೇ ಧಗಧಗನೇ ಹೊತ್ತಿ ಉರಿದ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 20 ಕಂಟೇನರ್ಗಳು ಸಮುದ್ರಕ್ಕೆ ಬಿದ್ದಿವೆ. ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಈ ಹಡಗು ಸುಮಾರು 650 ಕಂಟೇನರ್ಗಳನ್ನು ಹೊತ್ತೊಯ್ಯುತ್ತಿತ್ತು, ಈ ವೇಳೆ ಸ್ಫೋಟ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ.
ಹಡಗಿನಲ್ಲಿ ಸುಮಾರು 40 ಸಿಬ್ಬಂದಿ ಇದ್ದು, ಘಟನೆಯಲ್ಲಿ 18 ಮಂದಿ ಬೆಂಕಿಯಿಂದ ತಪ್ಪಿಸಿಕೊಳ್ಳಲು ಸಮುದ್ರಕ್ಕೆ ಹಾರಿದ್ದಾರೆ. ಎಲ್ಲಾ 18 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆಯಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ. ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಕಂಟೈನರ್ ಹಡಗಿನಿಂದ 18 ಸಿಬ್ಬಂದಿಯನ್ನು ಭಾರತೀಯ ನೌಕಪಡೆ ಹಾಗೂ ಕರಾವಳಿ ರಕ್ಷಣಾ ಪಡೆ ಸಿಬ್ಬಂದಿ ರಕ್ಷಿಸಿರುವುದಾಗಿ ರಕ್ಷಣಾ ಮೂಲಗಳು ತಿಳಿಸಿವೆ.