
ಸಹ-ನಟಿ ಮೇಲೆ ಅತ್ಯಾಚಾರ ಮಾಡಿದ ಆರೋಪದಲ್ಲಿ ಜೈಲು ಸೇರಿದ್ದ ನಟ ಮಡೆನೂರು ಮನು ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.. ಜಾಮೀನಿನ ಮೇಲೆ ರಿಲೀಸ್ ಆಗಿದ್ದು, ಬಿಡುಗಡೆಯ ಬಳಿಕ ಮಾಧ್ಯಮಗಳಿಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಶಿವರಾಜ್ಕುಮಾರ್, ದರ್ಶನ್, ಮತ್ತು ಧ್ರುವ ಸರ್ಜಾ ಬಗ್ಗೆ ಆಡಿಯೋದಲ್ಲಿ ತಾವು ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ವೈರಲ್ ಆಗಿರುವ ಆಡಿಯೋ ನನ್ನದಲ್ಲ. ನಾನು ಶಿವಣ್ಣ, ದರ್ಶನ್ ಮತ್ತು ಧ್ರುವ ಬಗ್ಗೆ ಮಾತನಾಡಿಲ್ಲ. ನಾನು ಮೊದಲು ಶಿವಣ್ಣ ಅವರನ್ನ ಭೇಟಿ ಮಾಡಿ, ಸತ್ಯವನ್ನು ಅವರಿಗೆ ವಿವರಿಸಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಮನು, ನನ್ನ ವಿರುದ್ಧ ಯೋಜಿತ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದಾರೆ. ನನ್ನ ವಿರುದ್ಧ ಪ್ರತಿ ಹಂತದಲ್ಲಿಯೂ ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್ಗೆ ಮುಂಚೆ ಕುಣಿಗಲ್ ಬಳಿ ಮೊಟ್ಟೆ ಎಸೆದರು, ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಗಿದ್ದವರೇ ಕೇಸ್ ಮಾಡಿಸಿದರು. ರೇಪ್ ಕೇಸ್ನಲ್ಲಿ ತಪ್ಪಿಸಿಕೊಂಡವರು, 50 ಸಾವಿರ ಖರ್ಚು ಮಾಡಿ ಆಡಿಯೋ ರೆಡಿಮಾಡಿ, ನನ್ನ ಕಥೆ ಮುಗಿಸುವುದಾಗಿ ಧಮ್ಕಿ ಹಾಕಿದರು, ಎಂದು ಆರೋಪಿಸಿದ್ದಾರೆ.
ಮಡೆನೂರು ಮನು ಅವರ ಬಿಡುಗಡೆ ಮತ್ತು ಅವರ ಸ್ಫೋಟಕ ಹೇಳಿಕೆಗಳು ಸ್ಯಾಂಡಲ್ವುಡ್ನಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ. ತಮ್ಮ ವಿರುದ್ಧ ಯೋಜಿತ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿರುವ ಮನು, ನ್ಯಾಯಾಲಯದ ಮೂಲಕ ಸತ್ಯವನ್ನು ಬಯಲಿಗೆ ತರಲು ನಿರ್ಧರಿಸಿದ್ದಾರೆ.