
ಬೆಂಗಳೂರು: ಸಿನಿಮಾದ ಪ್ರಚಾರದ ವೇಳೆ ಇತ್ತೀಚೆಗೆ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ವಿವಾದದ ಹೇಳಿಕೆ ನೀಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಇದೀಗ ಕನ್ನಡತಿ ಧಾರವಾಹಿ ಖ್ಯಾತಿಯ ರಂಜನಿ ರಾಘವನ್ ಕಮಲ್ ಹಾಸನ್ ಅವರಿಗೆ ತಾವು ಬರೆದ ಕನ್ನಡದ ಪುಸ್ತಕವನ್ನು ನೀಡಿರುವ ಪೋಸ್ಟ್ ಅನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಹಿರಿಯ ನಟ ಕಮಲ್ ಹಾಸನ್ ಅವರ ‘ಥಗ್ ಲೈಫ್’ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಈ ಸಿನಿಮಾದ ಪ್ರಚಾರದಲ್ಲಿ ಕಮಲ್ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ಹೇಳಿಕೆ ನೀಡಿದ್ದರು. ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಕನ್ನಡ ಪರ ಸಂಘಟನೆ, ಕಲಾವಿದರು, ರಾಜಕೀಯ ಮುಖಂಡರು ಸೇರಿದಂತೆ ಅನೇಕರು ಹಿರಿಯ ನಟ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಮಲ್ ಹಾಸನ್ ಕೂಡಲೇ ಕ್ಷಮೆ ಕೇಳಬೇಕು ಇಲ್ಲದಿದ್ರೆ, ಅವರ ಸಿನಿಮಾ ರಿಲೀಸ್ ಆಗಲು ಬಿಡುವುದಿಲ್ಲ ಎಂದು ಕನ್ನಡ ಫಿಲ್ಕ್ ಚೇಂಬರ್ ಖಡಕ್ ಎಚ್ಚರಿಕೆ ನೀಡಿದೆ. ಆದರೆ ಇದುವರೆಗೆ ಇಂಡಿಯನ್ ನಟ ಕ್ಷಮೆ ಕೇಳಿಲ್ಲ. ಪ್ರೀತಿಯಿಂದ ಹೇಳಿದ್ದಕ್ಕೆ ಕ್ಷಮೆ ಕೇಳಲ್ಲವೆಂದು ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ನಡುವೆ ಕನ್ನಡ ಕಿರುತೆರೆ ನಟಿಯೊಬ್ಬರು ಕಮಲ್ ಹಾಸನ್ ಅವರನ್ನು ಭೇಟಿಯಾಗಿ ಕನ್ನಡ ಪುಸ್ತಕವನ್ನು ನೀಡಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಲೇಖಕಿ, ನಟಿ, ನಿರ್ದೇಶಕಿ, ಗಾಯಕಿಯಾಗಿರುವ ರಂಜನಿ ರಾಘವನ್ ತಾವು ಬರೆದ ‘ಸ್ಟೈಪ್ ರೈಟ್’, ‘ಕತೆ ಡಬ್ಬಿ’ ಪುಸ್ತಕವನ್ನು ನೀಡಿದ್ದಾರೆ. ಕಮಲ್ ಸರ್ಗೆ ಕನ್ನಡ ಪುಸ್ತಕವೆಂದು ಫೋಟೋ ಕೆಳಗೆ ಬರೆದಿದ್ದಾರೆ.
ರಂಜನಿ ಅವರ ಪುಸ್ತಕವನ್ನು ನಗುತ್ತಲೇ, ಪ್ರೀತಿಯಿಂದ ಕಮಲ್ ಹಾಸನ್ ಸ್ವೀಕರಿಸಿದ್ದಾರೆ. ಸದ್ಯ ರಂಜನಿ ಅವರು ಕಮಲ್ ಅವರನ್ನು ಭೇಟಿಯಾಗಿ ಕನ್ನಡ ಪುಸ್ತಕ ನೀಡಿರುವ ಫೋಟೋ, ವಿಡಿಯೋ ವೈರಲ್ ಆಗಿದೆ.