
ಬೆಂಗಳೂರು: ನಡುರಸ್ತೆಯಲ್ಲಿ ಯುವಕ-ಯುವತಿ ಚಲಿಸುತ್ತಿದ್ದ ಕಾರಿನ ಸನ್ ರೂಫ್ ನಿಂದ ಹೊರಬಂದು ಒಬ್ಬರಿಗೊಬ್ಬರು ಚುಂಬಿಸಿ ಹುಚ್ಚಾಟ ತೋರಿದ್ದ ಪ್ರಕರಣದಲ್ಲಿ ಕಾರು ಮಾಲೀಕನಿಗೆ ಸಂಚಾರಿ ಪೊಲೀಸರು ದಂಡ ವಿಧಿಸಿದ್ದಾರೆ.. ಕಾರು ಮಾಲೀಕನನ್ನು ಪತ್ತೆ ಹಚ್ಚಿದ ಹಲಸೂರು ಸಂಚಾರಿ ಠಾಣಾ ಪೊಲೀಸರು, 1500 ರೂ. ದಂಡ ವಿಧಿಸಿ, ಎಚ್ಚರಿಕೆ ನೀಡಿರುವುದಾಗಿ ತಿಳಿಸಿದ್ದಾರೆ..
ಟ್ರಿನಿಟಿ ರಸ್ತೆಯ ಬಳಿ ನಡು ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನ ಸನ್ರೂಫ್ಯಿಂದ ಹೊರಬಂದು ಜೋಡಿಯೊಂದು ಅಸಂಬದ್ಧವಾಗಿ ವರ್ತಿಸಿದ ಘಟನೆ ಮೇ 26ರಂದು ರಾತ್ರಿ 11:30 ರ ಸುಮಾರಿಗೆ ನಡೆದಿದೆ.. ಸದ್ಯ ಈ ವಿಡಿಯೋವನ್ನ ಹಿಂಬದಿ ಬರುತ್ತಿದ್ದ ಕಾರಿನ ಸವಾರ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿದ್ದಾರೆ.
ಜೊತೆಗೆ ನಡು ರಸ್ತೆಯಲ್ಲಿ ಮುತ್ತು ಕೊಡುತ್ತಾ ಅತಿರೇಕದ ವರ್ತನೆ ತೋರಿದ ವಿಡಿಯೋ ಎಕ್ಸ್ನಲ್ಲಿ ಹಂಚಿಕೊಂಡು ಪೊಲೀಸರಿಗೆ ಟ್ಯಾಗ್ ಮಾಡಿ, ಇದರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿಕೊಂಡು, ದಂಡದ ಮೊತ್ತವನ್ನು ಸಂಗ್ರಹಿಸಲಾಯಿತು ಹಾಗೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಲು ತಿಳಿಸಲಾಯಿತು ಎಂದು ಹಲಸೂರು ಸಂಚಾರ ಠಾಣಾ ಪೊಲೀಸರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.