
ಟಾಲಿವುಡ್‌ನ ಖ್ಯಾತ ಗಾಯಕಿ ಮಂಗ್ಲಿಯ ಹುಟ್ಟುಹಬ್ಬ ಪಾರ್ಟಿಯ ಮೇಲೆ ಪೊಲೀಸರು ನಿನ್ನೆ ತಡರಾತ್ರಿ ದಾಳಿ ಮಾಡಿದ್ದು, ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ ಪತ್ತೆಯಾಗಿದೆ. ಈ ದಾಳಿಯಲ್ಲಿ ಗಾಂಜಾ, ವಿದೇಶಿ ಮದ್ಯ ಸೇರಿದಂತೆ ನಿಷೇಧಿತ ವಸ್ತುಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಈ ಘಟನೆಯಿಂದ ಮಂಗ್ಲಿ ಮತ್ತು ರೆಸಾರ್ಟ್ ಆಡಳಿತ ಮಂಡಳಿಯ ವಿರುದ್ಧ ಕಾನೂನು ಕ್ರಮ ಜರುಗಿದ್ದು, ತನಿಖೆ ಆರಂಭವಾಗಿದೆ.
ಮಂಗ್ಲಿ ಹುಟ್ಟುಹಬ್ಬದ ಪಾರ್ಟಿಯ ಮೇಲೆ ಹೈದರಾಬಾದ್ ಪೊಲೀಸರ ಮಾದಕ ವಸ್ತು ನಿಗ್ರಹ ದಳದ ಸದಸ್ಯರು ದಾಳಿ ನಡೆಸಿದ್ದು, ಈ ವೇಳೆ ಪಾರ್ಟಿಯಲ್ಲಿ ಹಾಜರಿದ್ದವರ ರಕ್ತದ ಮಾದರಿಗಳನ್ನು ತೆಗೆದುಕೊಳ್ಳಲಾಗಿತ್ತು. ಆ ಪೈಕಿ ಒಂಬತ್ತು ಮಂದಿ ಮಾದಕ ವಸ್ತು ಸೇವಿಸಿರುವುದು ಖಾತ್ರಿ ಆಗಿದೆ. ಒಂಬತ್ತು ಮಂದಿ ಗಾಂಜಾ ಸೇವನೆ ಮಾಡಿದ್ದರು ಎನ್ನಲಾಗುತ್ತಿದೆ. ಪೊಲೀಸರಿಂದ ಅಧಿಕೃತ ಮಾಹಿತಿ ಇನ್ನಷ್ಟೆ ಹೊರಬೀಳಬೇಕಿದೆ.
ಮಂಗ್ಲಿಯ ಹುಟ್ಟುಹಬ್ಬದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ತಮ್ಮ ಆಪ್ತ ಸ್ನೇಹಿತರು ಮತ್ತು ತೆಲುಗು ಚಿತ್ರರಂಗದ ಕೆಲವು ಪ್ರಮುಖ ಸದಸ್ಯರೊಂದಿಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರೆಸಾರ್ಟ್‌ನ ಒಳಗೆ ಜನ್ಮದಿನದ ಸಂಭ್ರಮದ ವಾತಾವರಣವಿತ್ತು. ಆದರೆ, ಪೊಲೀಸರ ಆಗಮನದಿಂದ ಸಂಭ್ರಮ ಕ್ಷಣದಲ್ಲಿ ಮುಗಿಯಿತು. ತಕ್ಷಣವೇ ಸ್ಥಳದಲ್ಲಿ ತಪಾಸಣೆ ಆರಂಭಿಸಿದ ಪೊಲೀಸರು, ಗಾಂಜಾದೊಂದಿಗೆ ಧ್ವನಿ ಮಾಲಿನ್ಯ ಕಾಯ್ದೆಯನ್ನು ಉಲ್ಲಂಘಿಸಿರುವುದನ್ನು ಕಂಡುಕೊಂಡರು. ಈ ಕಾರಣಕ್ಕಾಗಿ NDPS (ನಾರ್ಕೋಟಿಕ್ ಡ್ರಗ್ಸ್ ಆಂಡ್ ಸೈಕೋಆಕ್ಟಿವ್ ಸಬ್‌ಸ್ಟಾನ್ಸ್) ಕಾಯ್ದೆ ಮತ್ತು ಧ್ವನಿ ಮಾಲಿನ್ಯ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.