
ಮಂಗಳೂರು: ಸೆಮಿನಾರ್ ತಪ್ಪಿಸಲು ಓರ್ವ ವಿದ್ಯಾರ್ಥಿನಿ ಮಂಗಳೂರಿನ ಕಣಚೂರು ಆಸ್ಪತ್ರೆಗೆ ಜೂನ್ 4 ರಂದು ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ್ದು, ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ದೂರು ನೀಡಿದ ವಿದ್ಯಾರ್ಥಿನಿಯನ್ನೇ ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು ವಿದ್ಯಾರ್ಥಿನಿ ಡಾ.ಚಲಸಾನಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದಾರೆ.
ಜೂನ್ 4 ರಂದು ಬೆಳಗ್ಗೆ 8-45 ಗಂಟೆಗೆ ದೇರಳಕಟ್ಟೆ ನಾಟೆಕಲ್ ರೋಡ್ ಕಣಚೂರು ಆಸ್ಪತ್ರೆಗೆ ಅನಾಮಧೇಯ ವ್ಯಕ್ತಿಯು ಕರೆ ಮಾಡಿ, ಆಸ್ಪತ್ರೆಗೆ ಬಾಂಬ್ ಇರಿಸಲಾಗಿದೆ, 11 ಗಂಟೆಯೊಳಗಾಗಿ ಆಸ್ಪತ್ರೆಯನ್ನು ಖಾಲಿ ಮಾಡಬೇಕೆಂದು 5 ಬಾರಿ ಕರೆ ಮಾಡಿ ಬೆದರಿಕೆ ಹಾಕಿರುತ್ತಾನೆ ಎಂದು ವಿದ್ಯಾರ್ಥಿನಿ ತಿಳಿಸಿದ್ದಳು.
ಈ ಬೆದರಿಕೆಯ ಬಗ್ಗೆ ದೂರು ಬಂದ ಮೇರೆಗೆ 25-30 ಜನ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರು, ಬಾಂಬ್ ನಿಷ್ಕ್ರಿಯ ತಂಡ ಹಾಗೂ ಶ್ವಾನ ದಳ ತಂಡದೊಂದಿಗೆ ಆಸ್ಪತ್ರೆಯ ಸಂಪೂರ್ಣ ಕಟ್ಟಡ, ಆಸ್ಪತ್ರೆಯ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರವನ್ನು ನಿರಂತರವಾಗಿ 10 ಗಂಟೆಗಳ ಕಾಲ ಪರಿಶೀಲಿಸಿದಾಗ ಯಾವುದೇ ರೀತಿಯ ಬಾಂಬ್ ಪತ್ತೆಯಾಗಿರಲಿಲ್ಲ..
ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡದವರು ಆರೋಪಿ ಪತ್ತೆಗೆ ತಾಂತ್ರಿಕ ವಿಶ್ಲೇಷಣೆಗೆ ಒಳಪಡಿಸಿದಾಗ ದೂರು ನೀಡಿದ ವಿದ್ಯಾರ್ಥಿನಿಯೇ ಆರೋಪಿ ಎಂಬುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸರು ಡಾ.ಚಲಸಾನಿ ಮೋನಿಕಾ ಚೌಧರಿಯನ್ನು ಬಂಧಿಸಿದ್ದಾರೆ.