
ಜಮ್ಮು & ಕಾಶ್ಮೀರ: ಪ್ರಧಾನಿ ನರೇಂದ್ರ ಮೋದಿ ಅವರು ಜಗತ್ತಿನ ಅತಿ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಶುಕ್ರವಾರ ಉದ್ಘಾಟಿಸಿದ್ದಾರೆ. ಜಮ್ಮು-ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಇದ್ದು, ಈ ಸೇತುವೆ ನದಿಮಟ್ಟದಿಂದ 359 ಮೀಟರ್ ಎತ್ತರವಿದೆ. 1,315 ಮೀಟರ್ ಉದ್ದವಿದೆ. ವಿಶ್ವವಿಖ್ಯಾತ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರವಾಗಿದೆ.
ಉದ್ಘಾಟನೆ ವೇಳೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಸಿಎಂ ಒಮರ್ ಅಬ್ದುಲ್ಲಾ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕೂಡ ಉಪಸ್ಥಿತರಿದ್ದರು. ಚೆನಾಬ್ ಸೇತುವೆಯ ನಂತರ, ಜಮ್ಮು- ಕಾಶ್ಮೀರದಲ್ಲಿ ಅಂಜಿ ನದಿಯ ಮೇಲೆ ನಿರ್ಮಿಸಲಾದ ದೇಶದ ಮೊದಲ ಕೇಬಲ್-ಸ್ಟೇಡ್ ರೈಲು ಸೇತುವೆ ಇದಾಗಿದೆ. ಇದು ಭೂಕಂಪ ಮತ್ತು ಪ್ರಬಲ ಗಾಳಿಯ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯಾಗಿದೆ. ಇದು ಜಮ್ಮು-ಶ್ರೀನಗರ ನಡುವಿನ ಸಂಪರ್ಕವನ್ನು ಹೆಚ್ಚಿಸುವುದು.
ಸೇತುವೆಯ ಮೇಲೆ ಚಲಿಸುವ ವಂದೇ ಭಾರತ್ ರೈಲು ಮೂಲಕ, ಕತ್ರಾ ಮತ್ತು ಶ್ರೀನಗರ ನಡುವೆ ಪ್ರಯಾಣಿಸಲು ಕೇವಲ 3 ಗಂಟೆಗಳು ಬೇಕಾಗುತ್ತದೆ, ಇದು ಈಗಿನ ಪ್ರಯಾಣದ ಸಮಯವನ್ನು 2-3 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.ಇನ್ನು ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯ ಭಾಗವಾಗಿದೆ. ಚೆನಾಬ್ ರೈಲ್ವೆ ಸೇತುವೆ ಉದ್ಘಾಟನೆ ಬಳಿಕ ಮೋದಿ ಅವರು, ಅಂಜಿ ನದಿಯ ಮೇಲೆ ನಿರ್ಮಿಸಲಾದ ಭಾರತದ ಮೊದಲ ಕೇಬಲ್-ಸ್ಟೇ ರೈಲು ಸೇತುವೆಯನ್ನು ಉದ್ಘಾಟಿಸಿದರು.