
18ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿದ ಆರ್ಸಿಬಿ ಗೆಲುವನ್ನು ಇಡೀ ಕರ್ನಾಟಕವೇ ಊರ ಹಬ್ಬವಂತೆ ಸಂಭ್ರಮಿಸುತ್ತಿದೆ. ಪ್ರತಿ ಅಭಿಮಾನಿಗಳ ಮನೆಯಲ್ಲೂ ಸಂಭ್ರಮ ಮುಗಿಲು ಮುಟ್ಟಿದೆ. ಈ ಸಲ ಕಪ್ ನಮ್ದು. 2008 ರಿಂದ 2025 ಅಂದರೆ 18 ವರ್ಷ. ಈ ಸುದೀರ್ಘ 18 ವರ್ಷಗಳ ಪ್ರಯಾಣದಲ್ಲಿ ನಮ್ಮ ಆರ್ಸಿಬಿ ತಂಡ, ಕೋಟ್ಯಂತರ ಅಭಿಮಾನಿಗಳ ಕನಸು ನನಸಾಗಿದೆ. ಆರ್ಸಿಬಿ ಐಪಿಎಲ್ ಟ್ರೋಫಿಗೆ ಮುತ್ತಿಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಅಂತೂ ನೆಕ್ಸ್ಟ್ ಲೆವೆಲ್ನಲ್ಲಿತ್ತು.
ಒಂದು ಕಡೆ ಐಪಿಎಲ್ ಟ್ರೋಫಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೈ ಸೇರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಸಖತ್ ಜೋರಾಗಿತ್ತು. ಸಿಲಿಕಾನ್ ಸಿಟಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಬೆಳಗಾವಿ, ರಾಯಚೂರು, ಕಲಬುರಗಿ, ಧಾರವಾಡ, ದಾವಣಗೆರೆ, ಮಂಡ್ಯ, ರಾಮನಗರ, ಕೊಪ್ಪಳ ಸೇರಿದಂತೆ ರಾಜ್ಯಾದ್ಯಂತ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಹಲವೆಡೆ ಲೈವ್ ಸ್ಕ್ರೀನ್ನಲ್ಲಿ ಪಂದ್ಯ ವೀಕ್ಷಿಸಿದ ಫ್ಯಾನ್ಸ್ ಸಂಭ್ರಮಾಚರಣೆ ನಡೆಸಿದರು.