
ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂನ್ 3ರಂದು ನಡೆದ ದುರಂತ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ ಸೇರಿದಂತೆ ನಾಲ್ವರಿಗೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ. ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್, ಮತ್ತು ಶಮಂತ್ ಮಾವಿನಕೆರೆ ಅವರು ತಮ್ಮ ಪಾಸ್ಪೋರ್ಟ್ಗಳನ್ನು ಕೋರ್ಟ್ಗೆ ನೀಡುವ ಷರತ್ತಿನೊಂದಿಗೆ ನ್ಯಾಯಮೂರ್ತಿ ಎಸ್. ಆರ್. ಕೃಷ್ಣಕುಮಾರ್ ಅವರಿದ್ದ ಏಕಸದಸ್ಯ ಪೀಠ ಮದ್ಯಂತರ ಜಾಮೀನು ನೀಡಿ ಆದೇಶಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತ ಪ್ರಕರಣದಲ್ಲಿ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ ನಡೆಸಿದ ನ್ಯಾ. ಕೃಷ್ಣಕುಮಾರ್ ಅವರಿದ್ದ ಪೀಠ ನಿಖಿಲ್ ಸೋಸಲೆ, ಸುನೀಲ್ ಮ್ಯಾಥ್ಯೂ, ಕಿರಣ್, ಶಮಂತ್ ಎಲ್ಲರಿಗೂ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಅಲ್ಲದೇ ದೇಶ ಬಿಟ್ಟು ಹೋಗದಂತೆ ಷರತ್ತು ವಿಧಿಸಿದೆ. ಅರ್ಜಿದಾರರ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದರು.
ಆರ್ಸಿಬಿಯ ಗೆಲುವನ್ನು ಸಂಭ್ರಮಿಸಲು ಜೂನ್ 3ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ವೀಕ್ಷಿಸಲು ಲಕ್ಷಾಂತರ ಅಭಿಮಾನಿಗಳು ಕ್ರೀಡಾಂಗಣದ ಸುತ್ತಮುತ್ತ ಜಮಾಯಿಸಿದ್ದರು. ಆದರೆ, ಗುಂಪಿನ ಅವ್ಯವಸ್ಥೆಯಿಂದ ಕಾಲ್ತುಳಿತ ಸಂಭವಿಸಿ 11 ಮಂದಿ ದುರಂತವಾಗಿ ಮೃತಪಟ್ಟಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಆರ್ಸಿಬಿ ಮಾರ್ಕೆಟಿಂಗ್ ತಂಡದ ನಿಖಿಲ್ ಸೋಸಲೆ, ಡಿಎನ್ಎ ಎಂಟರ್ಟೈನ್ಮೆಂಟ್ನ ಸುನೀಲ್ ಮ್ಯಾಥ್ಯೂ, ಕಿರಣ್ ಕುಮಾರ್, ಮತ್ತು ಶಮಂತ್ ಮಾವಿನಕೆರೆ ಅವರನ್ನು ಪೊಲೀಸರು ಬಂಧಿಸಿದ್ದರು.