
ಆರ್ಸಿಬಿ ತಂಡ ಐಪಿಎಲ್ ಟ್ರೋಫಿ ಗೆದ್ದು ಬೆಂಗಳೂರಿನಲ್ಲಿ ವಿಜಯೋತ್ಸವ ಆಚರಿಸುವ ವೇಳೆ ಭೀಕರ ಕಾಲ್ತುಳಿತ ಸಂಭವಿಸಿ 11 ಜನರು ಉಸಿರು ಚೆಲ್ಲಿದ್ದಾರೆ. ಸರ್ಕಾರವೇ ಇದಕ್ಕೆ ನೇರಹೊಣೆ ಅಂತಾ ಬಿಜೆಪಿ ವಾಗ್ದಾಳಿ ಮಾಡಿದೆ. ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರು ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು ಕಾಲ್ತುಳಿತ ಸಂಬಂಧ ಪೊಲೀಸರ ಅಮಾನತು ಮಾಡಿರುವುದು ನಾಟಕವಷ್ಟೇ. ‘ಒಂದು ತಿಂಗಳು ಸಸ್ಪೆಂಡ್ ಅಂತಾ ನಾಟಕ ಮಾಡುತ್ತೇವೆ, ಬೇಸರ ಮಾಡಿಕೊಳ್ಳಬೇಡಿ’ ಎಂಬುದಾಗಿ ಮೊದಲೇ ಹೇಳಿರುತ್ತಾರೆ ಅಷ್ಟೇ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಟೀಕಿಸಿದರು.
ಪೊಲೀಸ್ ಇಲಾಖೆ ಸಲಹೆ ಧಿಕ್ಕರಿಸಿ ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡಿತ್ತು. ತಮ್ಮ ತಪ್ಪು ಮುಚ್ಚಿಕೊಳ್ಳಲು ಕಮಿಷನರ್ ಸೇರಿ ಹಲವರ ಅಮಾನತು ಮಾಡಿದ್ದಾರೆ. ಹೊಸ ವರ್ಷಾಚರಣೆ ವೇಳೆ ಕಮಿಷನರ್ ದಯಾನಂದ್ ಇದ್ದರು. ಲಕ್ಷಾಂತರ ಜನ ಸೇರಿದ್ದರೂ ಸಣ್ಣ ಅಹಿತಕರ ಘಟನೆಗೆ ಅವಕಾಶ ಕೊಟ್ಟಿರಲಿಲ್ಲ. ನಾನು ಬಿ. ದಯಾನಂದ್ ಪರ ವಕಾಲತ್ತು ಮಾಡುತ್ತಿಲ್ಲ. ಸಸ್ಪೆಂಡ್ ಆದ ಡಿಸಿಪಿ ಒಬ್ಬರು ಅಪ್ಪಯ್ಯನ ಆತ್ಮೀಯರು ಎಂದೂ ಕುಮಾರಸ್ವಾಮಿ ಹೇಳಿದರು.
ರಾಜ್ಯ ಸರ್ಕಾರವು ಸಿಐಡಿ, ನ್ಯಾಯಾಂಗ ತನಿಖೆ ಮತ್ತು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ ಎಂದು ಹೇಳುತ್ತಾರೆ. ಮೂರೂ ಸಂಸ್ಥೆಗಳು ತನಿಖೆ ನಡೆಸುವುದರಿಂದ ನ್ಯಾಯ ದೊರೆಯುವುದಿಲ್ಲ. ಯಾವುದೇ ಸತ್ಯ ಹೊರಬರಲು ಸಾಧ್ಯವಿಲ್ಲ ಎಂದರು.
ಇನ್ನು ಐಪಿಎಲ್ ಕಪ್ ಗೆದ್ದಿದ್ದು ಆರ್ಸಿಬಿ, ಫೋಟೋಗೆ ಪೋಸ್ ಕೊಟ್ಟಿದ್ದು ಕೆಪಿಸಿಸಿ ತಂಡ. ಅಂಧ ಮುಖ್ಯಮಂತ್ರಿ, ಅಂಧ ರಾಜ್ಯ ಎಂದು ಅಶೋಕ್ ಕಿಡಿಕಾರಿದರು. ಸಿಎಂ ಸಿದ್ದರಾಮಯ್ಯ ಬ್ಯಾಟರ್, ಡಿಸಿಎಂ ಡಿಕೆ ಬೌಲರ್. ಹೇಗಾದರೂ ಮಾಡಿ ಸಿದ್ದರಾಮಯ್ಯರನ್ನು ರನೌಟ್ ಮಾಡಿಸಬೇಕು ಎಂಬುದು ಡಿಕೆ ಆಶೆ. ಆದರೆ ಹಿಟ್ ವಿಕೆಟ್ ಆಗಿದ್ದು ರಾಜ್ಯದ ಜನರು ಎಂದು ಅಶೋಕ್ ವಾಗ್ದಾಳಿ ನಡೆಸಿದರು.
ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ತಂಡದ್ದು ಇದರಲ್ಲಿ ತಪ್ಪಿಲ್ಲ ಎಂದರು. ಸರ್ಕಾರ ಆರೋಪಿ ಸ್ಥಾನದಲ್ಲಿದೆ, ಘಟನೆಯನ್ನು ಜಿಲ್ಲಾಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಅಥವಾ ಸಿಐಡಿಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ಹಾಲಿ ಅಥವಾ ಮುಖ್ಯ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಇದೇ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಕಾಲ್ತುಳಿತ ಘಟನೆಯ ಪ್ರಮುಖ ಆರೋಪಿಗಳು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎಂದು ವಿಜಯೇಂದ್ರ ಆರೋಪಿಸಿದರು. ಕಾರ್ಯಕ್ರಮಕ್ಕೆ ಅನುಮತಿ ಇರಲಿಲ್ಲ ಎನ್ನುತ್ತಾರೆ. ಹಾಗಾದರೆ, ಡಿಸಿಎಂ ಡಿಕೆ ಶಿವಕುಮಾರ್ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿ ಟ್ರೋಫಿಗೆ ಮುತ್ತಿಕ್ಕಿ ಫೋಟೊಗೆ ಪೋಸ್ ಕೊಟ್ಟಿದ್ದು ಏಕೆ ಎಂದು ಪ್ರಶ್ನಿಸಿದರು.