
ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿ ಮೇಲೆ ಹುಲಿ ದಾಳಿ ಮಾಡಿರುವ ಘಟನೆ ಚಾಮರಾಜನಗರ ತಾಲೂಕಿನ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಅರಣ್ಯದಲ್ಲಿರುವ ರಾಮಯ್ಯನ ಪೋಡಿ ಎಂಬಲ್ಲಿ ನಡೆದಿದೆ. ಈ ದಾಳಿಯಲ್ಲಿ ರವಿ ಎಂಬಾತ ತೀವ್ರವಾಗಿ ಗಾಯಗೊಂಡಿದ್ದು, ಅವರ ತಲೆ, ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಗಾಯಾಳು ರವಿಯನ್ನು ಚಾಮರಾಜನಗರದ ಸರ್ಕಾರಿ ಭೋದನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ, ರಾಮಯ್ಯನ ಪೋಡಿಯಲ್ಲಿ ವಾಸಿಸುವ ಮೂರು ಕುಟುಂಬಗಳನ್ನು ಸಮೀಪದ ಆಶ್ರಮ ಶಾಲೆಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿದೆ.
ರವಿ ತನ್ನ ಚಿಕ್ಕಮ್ಮನ ಮನೆಗೆ ಹಬ್ಬದ ಸಂದರ್ಭದಲ್ಲಿ ಭೇಟಿ ನೀಡಿದ್ದರು. ನಿನ್ನೆ ರಾತ್ರಿ ಮೂತ್ರ ವಿಸರ್ಜನೆಗಾಗಿ ಮನೆಯಿಂದ ಹೊರಗೆ ಬಂದಾಗ ಹುಲಿಯು ಆಕಸ್ಮಿಕವಾಗಿ ದಾಳಿ ಮಾಡಿದೆ. ಅದೃಷ್ಟವಶಾತ್, ರವಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಈ ಘಟನೆಯಿಂದ ಸ್ಥಳೀಯರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದು, ಹುಲಿಯ ಚಲನವಲನವನ್ನು ಗಮನಿಸಲು ಕ್ಯಾಮರಾಗಳನ್ನು ಸ್ಥಾಪಿಸುವ ಸಾಧ್ಯತೆಯಿದೆ.