
ಬೆಂಗಳೂರು: ಆರ್ಸಿಬಿ ಐಪಿಎಲ್ ವಿಜಯೋತ್ಸವ ಕಾರ್ಯಕ್ರಮದ ವೇಳೆ ಕಾಲ್ತುಳಿತದಿಂದ 11 ಮಂದಿ ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ, ಬೃಹತ್ ಕಾರ್ಯಕ್ರಮಗಳಿಗೆ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ರೂಪಿಸಲು ಮುಂದಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ತಂಡದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟು 56 ಜನ ಗಾಯಗೊಂಡಿದ್ದಾರೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ದೃಢಪಡಿಸಿದ್ದಾರೆ.
ಗಾಯಗೊಂಡವರಲ್ಲಿ 46 ಮಂದಿ ಚಿಕಿತ್ಸೆ ಪಡೆದು ಮನೆಗಳಿಗೆ ತೆರಳಿದ್ದಾರೆ. 10 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಯಾರಿಗೂ ಗಂಭೀರ ಸ್ವರೂಪದಲ್ಲಿಲ್ಲ ಎಂದು ನಮ್ಮ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಇಂದು ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಾ ಪರಮೇಶ್ವರ್, ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ತಡೆಗಟ್ಟಲು ಸರ್ಕಾರ ಯಾವುದೇ ಸಭೆ ಸಮಾರಂಭಗಳನ್ನು ಮಾಡುವಾಗ, ವಿಜಯೋತ್ಸವವನ್ನು ಮಾಡುವ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯ ಮಾರ್ಗದರ್ಶನದಲ್ಲಿ ಮಾಡಬೇಕೆಂದು ಸೂಚನೆಗಳನ್ನು ನೀಡುತ್ತೇವೆ. ಹೊಸ ಶಿಷ್ಟಾಚಾರಗಳನ್ನು ಜಾರಿಗೆ ತರಲಾಗುವುದು ಎಂದರು.
ಬೆಂಗಳೂರಿನಲ್ಲಿ ನಡೆದ ಘಟನೆ ರೀತಿ ರಾಜ್ಯದ ಕ್ರಿಕೆಟ್ ಇತಿಹಾಸದಲ್ಲಿಯೇ ಆಗಿರಲಿಲ್ಲ. ಮೃತಪಟ್ಟ ಯುವಕ-ಯುವತಿಯರ ಆತ್ಮಕ್ಕೆ ಶಾಂತಿಯನ್ನು ಕೋರುತ್ತೇನೆ ಎಂದರು.